ಪ್ಯಾರೆ, ಆಂಬ್ರೋಸ್ - 
 ಸು. 1509-1590. ಯೂರೊಪಿನ ಪುನರುಜ್ಜೀವನ ಕಾಲದಲ್ಲಿಯ (ರಿನೇಸಾನ್ಸ್) ಅತ್ಯಂತ ಪ್ರಖ್ಯಾತ ವೈದ್ಯರುಗಳ ಪೈಕಿ ಒಬ್ಬ. ಫ್ರಾನ್ಸಿನ ಶಸ್ತ್ರಕ್ರಿಯಾತಜ್ಞ. ನವೀನ ಶಸ್ತ್ರಕ್ರಿಯೆಯ ಜನಕನೆಂದು ಅನೇಕರಿಂದ ಪರಿಗಣಿಸಲ್ಪಟ್ಟಿರುವಾತ. ಫ್ರಾನ್ಸಿನ ಲಾವಲ್ ಎಂಬಲ್ಲಿ ಶಿಲ್ಪಿಯ ಮಗನಾಗಿ ಜನನ. 1590 ಡಿಸೆಂಬರ್ 22 ರಂದು ಪ್ಯಾರಿಸಿನಲ್ಲಿ ಮರಣ.

ಮೊದಲ ವಿದ್ಯಾಭ್ಯಾಸವನ್ನು ಪ್ಯಾರೆ ಲಾವಲ್ಲಿನಲ್ಲಿಯೇ ಮುಗಿಸಿ 1535 ರಲ್ಲಿ ಪ್ಯಾರಿಸ್ಸಿಗೆ ಹೋಗಿ ಹೊಟೆಲ್ ಡೈಯುವಿನಲ್ಲಿ ನಾಪಿತಶಸ್ತ್ರಜ್ಞ ಕಸಬಿನಲ್ಲಿ (ಬಾರ್ಬರ್-ಸರ್ಜನ್) ತರಬೇತಿ ಪಡೆಯುವ ವಿದ್ಯಾಭ್ಯಾಸವನ್ನು ಮುಂದುವರಿಸಿದ. ಇದರ ಅಂಗವಾಗಿ ಅಂಗರಚನಾಶಾಸ್ತ್ರವನ್ನೂ ಶಸ್ತ್ರವಿದ್ಯೆಯನ್ನೂ ಅಭ್ಯಸಿಸಿದ. 1536 ರಲ್ಲಿ ತರಬೇತಿ ಮುಗಿಸಿ ಪದವಿಪಡೆದು ಸೈನ್ಯದ ಶಸ್ತ್ರತಜ್ಞನಾಗಿ ಸೇರಿ ಮಾರ್ಷಲ್ ಡಿ ಮಾರ್ಟ್‍ಜೀವನ ಕೈಕೆಳಗೆ ಇಟಲಿ ದಂಡಯಾತ್ರೆಗೆ ತೆರಳಿದ. 1539 ರಲ್ಲಿ ಪ್ಯಾರಿಸ್ಸಿಗೆ ವಾಪಸ್ಸಾಗಿ ಪುನಃ 1542 ರಲ್ಲಿ ವೈಕೌಂಟ್ ಡಿ ರೋಹಾನ್ ಎಂಬಾತನ ಕೈಕೆಳಗೆ ಪರ್ಪಿಗ್ನಾನಿಗೆ ಹೊರಟ. ಸುಮಾರು ಮೂವತ್ತು ವರ್ಷ ಹೀಗೆಯೇ ಮೇಲಿಂದ ಮೇಲೆ ಯುದ್ಧರಂಗಕ್ಕೆ ಹೋಗಿ ಬರುತ್ತಿದ್ದ. 1552 ರಲ್ಲಿ ಫ್ರಾನ್ಸಿನ ದೊರೆ ಎರಡನೆಯ ಹೆನ್ರಿಗೆ ಖಾಸಗಿ ಶಸ್ತ್ರಕ್ರಿಯಾತಜ್ಞನಾಗಿ ನೇಮಕಗೊಂಡ. ಹೆನ್ರಿಯ ತರುವಾಯ ಅವನ ಉತ್ತರಾಧಿಕಾರಿಗಳಾದ ಎರಡನೆಯ ಫ್ರಾನ್ಸಿಸ್, ಒಂಬತ್ತನೆಯ ಚಾಲ್ರ್ಸ್ ಮತ್ತು ಮೂರನೆಯ ಹೆನ್ರಿಗೂ ಅದೇ ಸ್ಥಾನದಲ್ಲಿ ಮುಂದುವರಿದ. ಮಿಕ್ಕ ವೈದ್ಯರುಗಳು ಹಲವರು ಹಗೆಗಳಾಗಿದ್ದು ಇವನು ದೊರೆ ಫ್ರಾನ್ಸಿಸ್ಸನಿಗೆ ವಿಷಹಾಕಿ ಕೊಂದನೆಂದು ಇವನ ಮೇಲೆ ತುಪಾನು ಹೊರಿಸಿದರು. ಪ್ಯಾರೆ ಒಬ್ಬ ಪ್ರಾಟೆಸ್ಟೆಂಟ್ ಧರ್ಮೀಯನಾಗಿದ್ದು, ರೋಮನ್ ಕ್ಯಾಥೊಲಿಕ್ಕರು ಇವನನ್ನು ಕೊಲೆ ಮಾಡಲು ಯತ್ನಿಸಿದಾಗ ದೊರೆ ಒಂಬತ್ತನೆಯ ಚಾಲ್ರ್ಸ್ ಇವನ ಜೀವ ಉಳಿಸಿದನೆಂದು ಪ್ರತೀತಿ ಇದ್ದರೂ ವಾಸ್ತವವಾಗಿ ಇವನು ಒಬ್ಬ ರೋಮನ್ ಕ್ಯಾಥೊಲಿಕ್ಕನೇ. 

ಪ್ಯಾರೆ ಕರುಣಾಳು ಶಸ್ತ್ರತಜ್ಞ. ತಮ್ಮವರು ಶತ್ರುಸೈನಿಕರು ಎಂಬ ಭೇದ ಭಾವ ಮಾಡದೆ ಗಾಯಗೊಂಡವರೆಲ್ಲರಿಗೂ ಚಿಕಿತ್ಸೆ ನೀಡುತ್ತಿದ್ದ. ಕದನರಂಗದಲ್ಲಿ ಭಾಗವಹಿಸುತ್ತಿದ್ದುದು ಪ್ಯಾರೆಗೆ ಅನೇಕ ಬಗೆಯ ಗಾಯಗಳ ಚಿಕಿತ್ಸೆಮಾಡುವ ಅವಕಾಶ ಕಲ್ಪಿಸಿತ್ತು. ತಾನು ಗಾಯವನ್ನು ಕಟ್ಟಿದರೆ ದೇವರು ಅದನ್ನು ವಾಸಿಮಾಡಿದ ಎಂದು ಪ್ಯಾರೆ ವಿನೀತನಾಗಿ ಹೇಳುತ್ತಿದ್ದುದುಂಟು. ಆಗಿನ ಕಾಲದ ಶಸ್ತ್ರಚಿಕಿತ್ಸೆಯಲ್ಲಿ ವಾಡಿಕೆಯಲ್ಲಿದ್ದ ನಿಷ್ಕರುಣ ವಿಧಾನಗಳನ್ನು ನಿಲ್ಲಿಸಬೇಕೆಂದೂ ಬಾಧಿತವ್ಯಕ್ತಿಗೆ ಹಿತವಾಗಿರುವಂಥ ಕ್ರಮಗಳನ್ನು ಕೈಗೊಳ್ಳಬೇಕೆಂದೂ ನಿರಂತರವಾದ ಚಳವಳಿಯನ್ನು ಪ್ಯಾರೆ ಹೂಡಿದ್ದ. ಕಾರಣಾಂತರಗಳಿಂದ ಕೈಕಾಲುಗಳನ್ನು ಛಿದ್ರಿಸಬೇಕಾದ ಸಂದರ್ಭಗಳಲ್ಲಿ ರಕ್ತಸ್ರಾವವನ್ನು ತಡೆಗಟ್ಟಲು ಕೆಂಪಗೆ ಕಾಸಿದ ಕಬ್ಬಿಣಗಳಿಂದ ರಕ್ತನಾಳಗಳಿಗೆ ಬರೆಹಾಕುವುದು ಆ ಕಾಲದಲ್ಲಿ ವಾಡಿಕೆ ಆಗಿತ್ತು - ಕುರುವಿನ ಮೇಲೆ ಬರೆ ಎಂಬ ಗಾದೆಗೆ ತಕ್ಕ ಹಾಗೆಯೇ. ಇಂಥ ಅಮಾನುಷ ಕ್ರಮದ ಬದಲು ಛಿದ್ರಿಸಿದ ರಕ್ತನಾಳಗಳನ್ನು ಹಿಡಿದು ದಾರದಿಂದ ಅವುಗಳ ಕೊನೆಯನ್ನು ಕಟ್ಟಿ ರಕ್ತಸ್ರಾವವನ್ನು ನಿಲ್ಲಿಸುವ ವಿಧಾನವನ್ನು ಪ್ಯಾರೆ ಆಚರಣೆಗೆ ತಂದ. ಈ ವಿಧಾನ ಬಹುಶಃ ಹಿಂದೆ ಆಚರಣೆಯಲ್ಲಿದ್ದು ಆ ಕಾಲದಲ್ಲಿ ಬಿಟ್ಟುಹೋಗಿತ್ತೆಂದೂ ಪ್ಯಾರೆ ಇದನ್ನು ಪುನಃ ಬಳಕೆಗೆ ತಂದನೆಂದೂ ತೋರುತ್ತದೆ. ಹೀಗೆಯೇ ತಲೆ ಬುರುಡೆಯಲ್ಲಿ ರಂಧ್ರ ಮಾಡಬೇಕಾದ ಸಂದರ್ಭದಲ್ಲೂ ಆಗ ವಾಡಿಕೆಯಲ್ಲಿದ್ದ ಭೀಕರವಿಧಾನವನ್ನು ಬದಲಿಸಿ ತಕ್ಕ ಮಟ್ಟಿಗೆ ಸಹಿಸಬಹುದಾದ ಕ್ರಮವನ್ನು ರೂಢಿಗೆ ತಂದ. ಇಂಥ ಕರುಣಾಮಯ ವಿಧಾನಗಳನ್ನು ಪ್ಯಾರೆ ಆಚರಣೆಗೆ ತಂದನೆಂದು ವಿವರಿಸುವಲ್ಲಿ ಎಲ್ಲರೂ ಒಂದು ಸಂಗತಿ ಹೇಳುತ್ತಾರೆ. ಆ ಕಾಲದಲ್ಲಿ ಗುಂಡಿನೇಟಿನಿಂದ ಗಾಯವಾದವರಿಗೆ ಗುಂಡಿನ ವಿಷ ಖಚಿತಮಾರಕವಾಗುತ್ತಿದ್ದುದನ್ನು ತಪ್ಪಿಸಲು ಗಾಯಗಳ ಮೇಲೆ ಕುದಿಯುತ್ತಿದ್ದ ಎಣ್ಣೆ ಹಾಕಿ ಚಿಕಿತ್ಸಿಸುತ್ತಿದ್ದರಂತೆ. 1536 ರಲ್ಲಿ ಟ್ಯೂರಿನ್ನಿನ ಮುತ್ತಿಗೆ ಕಾಲದಲ್ಲಿ ಪ್ಯಾರೆ ಕಾರ್ಯನಿರತನಾಗಿದ್ದಾಗ ಒಂದು ಸಲ ಎಣ್ಣೆ ದಾಸ್ತಾನು ಮುಗಿದುಹೋಯಿತಂತೆ. ಗಾಯಾಳುಗಳಿಗೆ ಚಿಕಿತ್ಸೆಯೇ ಮಾಡದೆ ಹೇಗಿರುವುದು ಎಂದು ಯೋಚಿಸಿ ಪ್ಯಾರೆ ಗಾಯಗಳಿಗೆ ತತ್ತಿಯ ಹಳದಿ, ಟರ್ಪೆಟೈನ್ ಮತ್ತು ಗುಲಾಬಿ ಎಣ್ಣೆಯ ಮಿಶ್ರಣಮಾಡಿ ಲೇಪಿಸಿದನಂತೆ ಮುಂದಿನ ದಿನಗಳಲ್ಲಿ ಈ ಗಾಯಗಳು ಮಾಮೂಲಾಗಿ ಕುದಿಯುವ ಎಣ್ಣೆಯ ಚಿಕಿತ್ಸೆ ಪಡೆದ ಗಾಯಾಳುಗಳಿಗಿಂತ ಬೇಗ ಮತ್ತು ಚೆನ್ನಾಗಿ ವಾಸಿಆದವಂತೆ. ಗಾಯದ ನೋವು ಕಡಿಮೆ ಆಗಿತ್ತು. ಗಾಯಗಳು ಊದಿಕೊಂಡಾಗಲಿ ಉರಿಯುತ್ತಲಾಗಲಿ ಇರಲಿಲ್ಲ. ಮುಂದೆ ಬೇರೆಬೇರೆ ಔಷಧಗಳನ್ನು ಪ್ರಯೋಗಿಸಿ ನೀರು ಬೆರೆಸಿದ ದ್ರಾಕ್ಷಾರಸ (ಆಕ್ವವೈಟೀ) ಕೂಡ ಒಳ್ಳೆಯ ಮುದ್ದು ಎಂದು ಕಂಡುಕೊಂಡ. ಮುಖ್ಯವಾಗಿ ಗುಂಡಿನಿಂದಾದ ಗಾಯ ಸ್ವತಃ ಕಾದ ಕಬ್ಬಿಣದಿಂದ ಸುಟ್ಟು ಚಿಕಿತ್ಸಿಸಬೇಕಾದ ವಿಷಯುಕ್ತ ಪರಿಸ್ಥಿತಿಯಾಗಿರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದ. ತಾನು ಆಚರಣೆಗೆ ತಂದ ಈ ಮಾನವೀಯ (ಹ್ಯುಮೇನ್) ಚಿಕಿತ್ಸಾ ಕ್ರಮದ ಬಗ್ಗೆ ಸುಮಾರು ಐವತ್ತು ವರ್ಷಗಳ ತರುವಾಯ ಪ್ಯಾರೆಯೇ ವಿವರಿಸಿದ್ದೂ ಉಂಟು. ಟ್ಯೂರಿನ್ ಮುತ್ತಿಗೆಯ ಬಳಿಕ ಮುಂದೆ ಗುಂಡಿನಿಂದ ಗಾಯಗೊಂಡವರನ್ನು ಪ್ಯಾರೆ ತನ್ನ ಪರಿಷ್ಕøತ ವಿಧಾನದಿಂದಲೇ ಚಿಕಿತ್ಸಿಸಲು ಪ್ರಾರಂಭಿಸಿ 1545 ರಲ್ಲಿ ಚಿಕಿತ್ಸಾವಿಧಾನದ ತಪಶೀಲುಗಳನ್ನು ಪ್ರಚುರಪಡಿಸಿದ. ಇದರ ಫಲ ಈತ ಎಲ್ಲ ಘನವೈದ್ಯರ ನಗೆಗೂ ಪಾತ್ರನಾದದ್ದು ಮಾತ್ರ ! ಬಹುಶಃ ನಗೆಪಾಟಲಾದದ್ದರ ಗುಟ್ಟು ಬೇರೆಯೇ ಎಂದು ತೋರುತ್ತದೆ. ಚಿಕಿತ್ಸಾ ವಿಧಾನದ ತಪಶೀಲನ್ನು ಪ್ಯಾರೆ ವೈದ್ಯ ವಿದ್ವಾಂಸರಂತೆ ಲ್ಯಾಟಿನ್ನಿನಲ್ಲಿ (ಅವನಿಗೆ ಲ್ಯಾಟಿನ್ ಭಾಷೆಯೇ ಗೊತ್ತಿರಲಿಲ್ಲ) ವಿವರಿಸದೇ ಜನಸಾಮಾನ್ಯ ಭಾಷೆಯಾದ ಫ್ರೆಂಚಿನಲ್ಲಿ ವಿವರಿಸಿದ್ದ. ವೈದ್ಯಕೀಯ ಲೇಖನವನ್ನು ಶ್ರೇಷ್ಠ ಭಾಷೆ ಲ್ಯಾಟಿನ್ನಿನಲ್ಲಿ ಬರೆಯಲೂ ಬರದ ಇವನೆಂಥ ವೈದ್ಯ, ಇವನ ಲೇಖನ ಇನ್ನೆಷ್ಟು ಗಮನೀಯವಾಗಿದ್ದೀತು ಎನ್ನುವ ಅವಹೇಳನ ಧೋರಣೆಯೇ ಪ್ರಧಾನವಾಗಿತ್ತು ಎನ್ನಿಸುತ್ತದೆ. ಪ್ಯಾರೆಯ ಚಿಕಿತ್ಸಾ ಕ್ರಮಗಳು ಅನೇಕ ವೇಳೆ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುತ್ತಿದ್ದ ಕ್ರಮಗಳಿಗೆ ವ್ಯತಿರಿಕ್ತವೇ ಆಗಿರುತ್ತಿದ್ದುವು. ಇದರಿಂದಲೂ ಈತ ವಿಶ್ವವಿದ್ಯಾಲಯದ ಮೆಟ್ಟಲನ್ನೇ ಏರಿರದಿದ್ದುದರಿಂದಲೂ ಲೇಖನಗಳನ್ನು ಬಳಕೆ ಭಾಷೆಯಲ್ಲಿ ಬರೆಯುತ್ತಿದ್ದುದರಿಂದಲೂ ಅವನ್ನು ಪ್ರಕಟಿಸುವುದಕ್ಕೆ ಕೂಡ ವೈದ್ಯ ಕ್ಷೇತ್ರದಲ್ಲಿ ಅಗಾಧ ಪ್ರತಿಭಟನೆ ಇತ್ತು. ನ್ಯಾಯಾಲಯದ ರಕ್ಷಣೆ ಪಡೆದು ಪ್ರಕಟಿಸಬೇಕಾಯಿತು. ಈ ಪ್ರಕಟಣೆಗಳು ಜನಾದರಣೀಯವಾದುವು. ಸ್ವಲ್ಪ ಕಾಲಾನಂತರ ಲ್ಯಾಟಿನ್ ಮತ್ತು ಇತರ ಭಾಷೆಗಳಿಗೂ ಪರಿವರ್ತಿಸಲ್ಪಟ್ಟವು. ಮತ್ತು ಯೂರೊಪಿನಲ್ಲೆಲ್ಲ ಮುಂದೆ ಸುಮಾರು ನೂರು ವರ್ಷಗಳ ಪರ್ಯಂತ ಪ್ರಸಿದ್ಧವಾಗಿಯೇ ಇದ್ದುವು. ಆದರೆ, ಸ್ವತಃ ಫ್ರಾನ್ಸಿನಲ್ಲಿ ಮಾತ್ರ ವೈದ್ಯಕೀಯ ರಂಗದ ಪೂರ್ವಾಗ್ರಹ ಪೀಡನೆಯ ದೆಸೆಯಿಂದ ಶಸ್ತ್ರವೈದ್ಯ ಕೇವಲ ಎರಡು ತಲೆಮಾರುಗಳಲ್ಲಿ ಹಿನ್ನಡೆದು ಪ್ಯಾರೆ ಪೂರ್ವದಿನಗಳ ಮಟ್ಟಕ್ಕೆ ಇಳಿದುಹೋಯಿತು. ಪ್ಯಾರೆಗೆ ಆಗದಿದ್ದ ವೈದ್ಯವೃಂದದ ಚಿತಾವಣೆಯಿಂದಲೇ ಈ ಸ್ಥಿತಿ ಏರ್ಪಟ್ಟುದ್ದರ ಕಾರಣ ವೈದ್ಯ ಕ್ಷೇತ್ರದಲ್ಲಿ ಅತಿ ಪ್ರಬಲರಾಗಿದ್ದುದು ಅಧೋಗತಿಗಿಳಿದಿದ್ದ ಫ್ರಾನ್ಸಿನ ಶಸ್ತ್ರಚಿಕಿತ್ಸಾ ಮಟ್ಟ ಮುಂದೆ ಫ್ರಾನ್ಸಿನ ಮಹಾಕ್ರಾಂತಿಯ ಕಾಲದಲ್ಲಿ ಈ ವೃಂದದ ಪ್ರಾಬಲ್ಯ ಮೊಟಕಾಗುವ ತನಕವೂ ಮೇಲಕ್ಕೆ ಏಳಲಿಲ್ಲ.

ಅಂತ್ರವೃದ್ಧಿಯ (ಹರ್ನಿಯ) ಶಸ್ತ್ರಚಿಕಿತ್ಸೆಯ ಕ್ರಮವಾಗಿ ವೃಷಣವನ್ನು ತೆಗೆಯುವ ರೂಢಿಯನ್ನು ಕೈಬಿಟ್ಟ ಪ್ರಪ್ರಥಮ ಶಸ್ತ್ರಕ್ರಿಯಾತಜ್ಞರಲ್ಲಿ ಪ್ಯಾರೆ ಒಬ್ಬ. ಅಂಗಹೀನರುಗಳಿಗೆ ಹಲ್ಲು, ಕೃತಕ ಕೈಕಾಲುಗಳು, ಚಿನ್ನ ಬೆಳ್ಳಿಗಳಿಂದ ತಯಾರಾದ ಕೃತಕ ಕಣ್ಣುಗಳು ಇಂಥವನ್ನು ಜೋಡಿಸುವ ವಿಧಾನವನ್ನು ಪ್ಯಾರೆ ಆಚರಣೆಗೆ ತಂದ. ಅನೇಕ ಚಿಕಿತ್ಸಾ ಶಸ್ತ್ರಗಳನ್ನು ಉಪಜ್ಞಿಸಿದ್ದೂ ಉಂಟು. ರಕ್ತಸ್ರಾವ ನಿಲ್ಲಿಸಲು ಧಮನಿಗಳನ್ನು ಹಿಡಿಯಲಿಕ್ಕಾಗಿ ನಿರ್ಮಿಸಿದ ಕಾಗೆಕೊಕ್ಕು (ಕ್ರೋಸ್‍ಬೀಕ್) ಎಂಬ ಸಲಕರಣೆ ಇಂಥದ್ದೊಂದು. ಅಯೋರ್ಟ ಎಂಬ ಮಹಾಪಧಮನಿಯ ಊತಕ್ಕೆ (ಅನ್ಯೂರಿಸಮ್) ಪರಂಗಿ ರೋಗ (ಸಿಫಿಲಿಸ್) ಕಾರಣವೆಂದು ಪ್ರಪ್ರಥಮವಾಗಿ ಸೂಚಿಸಿದ. ಅಂತ್ರವೃದ್ಧಿಗೆ ಶಸ್ತ್ರಚಿಕಿತ್ಸೆಯ ಬದಲು ಆಸರೆ ಕಟ್ಟನ್ನು (ಟ್ರಸ್) ಬಳಸುವ ವಿಧಾನವನ್ನು ಜನಪ್ರಿಯವಾಗಿಸಿದ. ಗರ್ಭಸ್ಥ ಶಿಶುವಿನ ಅಸಹಜಭಂಗಿಯಿಂದಾಗಿ ಹೆರಿಗೆ ಕಷ್ಟವಾಗಬಹುದೆಂದು ತೋರಿದ ಸಂದರ್ಭಗಳಲ್ಲಿ ಗರ್ಭಿಣಿಯ ಉದರದ ಮೇಲೆಯೇ ಕೈಯಾಡಿಸುತ್ತ ಶಿಶುವಿನ ತಲೆ ಭಾಗ ಕೆಳಮೊಗ ಆಗುವಂತೆ ಹೊರಳಿಸುವ (ಎಕ್ಸ್‍ಟರ್ನಲ್ ಪೊಡಾಲಿಕ್ ವರ್ಷನ್) ಹಳೆಯ ವಿಧಾನವನ್ನು ಪುನರಾಚರಣೆಗೆ ತಂದ (ಮುಂದೆ ಇವನ ಶಿಷ್ಯರಿಂದ ಈ ವಿಧಾನ ಜನಪ್ರಿಯವಾಗಿಸಲ್ಪಟ್ಟು ಸುಮಾರು ನೂರು ವರ್ಷಗಳು ಆಚರಣೆಯಲ್ಲಿತ್ತು.)

ವೈಯಕ್ತಿಕವಾಗಿ ಪ್ಯಾರೆ ನಿಷ್ಕಪಟಿ, ಧರ್ಮಶ್ರದ್ಧೆಯುಳ್ಳವ. ಬಡವರ ಮತ್ತು ಅರಕ್ಷಿತರ ವಿಚಾರದಲ್ಲಿ ಆಸಕ್ತ. ಅವನಿಗೆ ಇಬ್ಬರು ಹೆಂಡಿರು ಮತ್ತು ಒಂಬತ್ತು ಮಕ್ಕಳು. ಅವನ ಕೊನೆಯ ದಿನಗಳಲ್ಲಿ - ಎಂಬತ್ತು ವರ್ಷದ ಮುದುಕನಾಗಿದ್ದರೂ - ನ್ಯಾವರ್ರೆಯ ಹೆನ್ರಿ ಲಿಯಾನ್ಸ್ ನಗರಕ್ಕೆ ಮುತ್ತಿಗೆ ಹಾಕಿದ್ದಾಗ, ನಗರ ರಸ್ತೆಯಲ್ಲಿ ತೆರಳುತ್ತಿದ್ದ ಜಾಥಾದ ಮುಖಂಡನಾದ ಮುಖ್ಯ ಪಾದ್ರಿಯನ್ನು (ಆರ್ಚ್ ಬಿಷಪ್) ತಡೆಹಿಡಿದು ಹೆನ್ರಿಯೊಡನೆ ಕಾದಾಟ ಮುಂದುವರಿಸದೇ ಸಂಧಾನಕ್ಕೆ ಬರಬೇಕೆಂದು ಒತ್ತಾಯದಿಂದ ಪ್ರಾರ್ಥಿಸಿದನಂತೆ. ಮುತ್ತಿಗೆಯ ದೆಸೆಯಿಂದ ಆಹಾರ ದೊರಕದೆ ಜನ ಸಾಯುವುದನ್ನು ಹೇಗಾದರೂ ತಪ್ಪಿಸಬೇಕೆಂಬುದು ಇವನ ಆಸೆ. ಇವನ ಪ್ರಾರ್ಥನೆಯ ಫಲವಾಗಿಯೋ ಇನ್ಯಾವ ಕಾರಣದಿಂದಲೋ ಅಂತೂ ಹೆನ್ರಿ ಮುತ್ತಿಗೆ ನಿಲ್ಲಿಸಿ ಕಾಲ್ತೆಗೆದದ್ದು ನಿಜ. ಇದಾದ ಸ್ವಲ್ಪ ಕಾಲದಲ್ಲೆ ಪ್ಯಾರೆ ತಾನು ಬಹುಕಾಲದಿಂದ ವಾಸವಾಗಿದ್ದ ಮನೆಯಲ್ಲಿ ಮೂವರು ಹೆಣ್ಣು ಮಕ್ಕಳನ್ನು ಮಾತ್ರ ಬಿಟ್ಟು ಅಸುನೀಗಿದ.
(ಎಸ್.ಆರ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ